ಬೆಂಗಳೂರು, ಡಿಸೆಂಬರ್ 19:ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ಹಾದಿ ನೋಡಿಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿರುವ ಭಿನ್ನಮತೀಯ ಶಾಸಕರಿಗೆ ಸೊಪ್ಪು ಹಾಕದಿರಲು ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ.
ಶನಿವಾರ ಸಂಜೆ ಪಕ್ಷದ ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಪ್ರಮುಖರೊಂದಿಗೆ ನಡೆದ ಬಿಜೆಪಿ ನಾಯಕರ ಸಭೆಯಲ್ಲಿ ಮಣೆ ಹಾಕದಿರುವ ಬಗ್ಗೆ ಒಲವು ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ. ಸಚಿವರನ್ನಾಗಿ ಮಾಡುವುದನ್ನು ಬಿಟ್ಟು ನಿಗಮ-ಮಂಡಳಿಗಳಿಗೆ ನೇಮಕ, ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡುವುದೂ ಸೇರಿದಂತೆ ಇನ್ನಿತರೆ ಬೇಡಿಕೆಗಳ ಬಗ್ಗೆ ಸಕಾರಾತ್ಮಕವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಿ. ಆದರೆ, ಯಾವುದೇ ಕಾರಣಕ್ಕೂ ಭಿನ್ನಮತೀಯ ಶಾಸಕರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ತಲೆಬಾಗುವ ಅಗತ್ಯವಿಲ್ಲ ಎಂದು ಸಂಘದ ಪ್ರಮುಖರು ಸರ್ಕಾರಕ್ಕೆ ಬಲವಾದ ಸಲಹೆ ಮಾಡಿದ್ದಾರೆ ಎನ್ನಲಾಗಿದೆ.
ಈ ಸಭೆಯಲ್ಲಿ ಸಚಿವರಾದ ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಅರವಿಂದ್ ಲಿಂಬಾವಳಿ, ಕಟ್ಟಾ ಸುಬ್ರಮಣ್ಯನಾಯ್ಡು, ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಡಿ.ಎಚ್. ಶಂಕರಮೂರ್ತಿ ಮೊದಲಾದವರು ಪಾಲ್ಗೊಂಡಿದ್ದರು.ಈ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾಗವಹಿಸಲಿಲ್ಲ.
-ಇದಕ್ಕೂ ಮೊದಲು ಬೆಳಗ್ಗೆಯಿಂದಲೇ ಸಂಘದ ಪ್ರಮುಖರು ಬಿಜೆಪಿಯಲ್ಲಿನ ಹಲವಾರು ಶಾಸಕರು, ಸಂಸದರೊಂದಿಗೆ ಮಾತುಕತೆ ನಡೆಸಿದರು. ಪ್ರಸಕ್ತ ಭಿನ್ನಮತ ಚಟುವಟಿಕೆಗಳ ಜತೆಗೆ ಮುಂಬರುವ ಪಕ್ಷದ ಸಾಂಸ್ಥಿಕ ಚುನಾವಣೆ ಬಗ್ಗೆಯೂ ಅಭಿಪ್ರಾಯ ಸಂಗ್ರಹಿಸಲಾಯಿತು.ಈ ಎಲ್ಲ ಶಾಸಕರು ಹಾಗೂ ಸಂಸದರು ಸಂಘ ಪರಿವಾರದ ಮೂಲದಿಂದ ಬಂದವರು ಎಂಬುದು ವಿಶೇಷ.
-ರಾತ್ರಿ ಸಿಎಂ ನಿವಾಸದಲ್ಲಿ ಚರ್ಚೆ: ನಂತರ ಶನಿವಾರ ರಾತ್ರಿ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ಭಿನ್ನಮತ ಸೇರಿದಂತೆ ಇತರ ವಿಷಯಗಳ ಬಗ್ಗೆ ಸಚಿವರೊಂದಿಗೆ ಸುದೀರ್ಘ ಸಭೆ ನಡೆಯಿತು.
- ಸದ್ಯಕ್ಕೆ ಸಂಪುಟ ವಿಸ್ತರಣೆಯಿಲ್ಲ- ಸಿಎಂ: ಸದ್ಯಕ್ಕೆ ಸಂಪುಟ ವಿಸ್ತರಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ವಿರುದ್ಧ ಸಮರ ಸಾರಿರುವ ಭಿನ್ನಮತೀಯ ಶಾಸಕರಿಗೆ ತಿರುಗೇಟು ನೀಡಿದ್ದಾರೆ.
ಶನಿವಾರ ಬೆಳಗ್ಗೆ ಸಮಾರಂಭವೊಂದರ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಯಾವುದೇ ಬಿಕ್ಕಟ್ಟು ಅಥವಾ ಭಿನ್ನಮತವಿಲ್ಲ. ಜನರಲ್ಲಿ ಗೊಂದಲ ಮೂಡಿಸಲೆಂದೇ ಪ್ರತಿಪಕ್ಷಗಳು ಈ ವಿಚಾರ ಪ್ರಸ್ತಾಪ ಮಾಡುತ್ತಿವೆ ಎಂದು ಆರೋಪಿಸಿದರು.ತಮ್ಮನ್ನು ಭೇಟಿ ಮಾಡಿದ ಕೆಲವು ಶಾಸಕರು ಅವರ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಚರ್ಚಿಸಿದ್ದಾರೆ. ಇದುವರೆಗೆ ಯಾವೊಬ್ಬ ಶಾಸಕನೂ ಮಂತ್ರಿ ಪದವಿ ನೀಡುವಂತೆ ಬೇಡಿಕೆ ಇಟ್ಟಿಲ್ಲ ಎಂದೂ ಅವರು ಹೇಳಿದರು.
-ಇಂದು ಮಂತ್ರಿಗಳ ಜತೆ ಸಭೆ: ಸೋಮವಾರ ವಿಧಾನಮಂಡಲದ ಅಧಿವೇಶನ ಮತ್ತೆ ಆರಂಭವಾಗಲಿದ್ದು ಅಲ್ಲಿ ಪ್ರತಿಪಕ್ಷಗಳಿಗೆ ಸೂಕ್ತ ಉತ್ತರ ನೀಡುವ ಕುರಿತು ಚರ್ಚಿಸಲು ಹಿರಿಯ ಶಾಸಕರು ಮತ್ತು ಮಂತ್ರಿಗಳ ಸಭೆಯನ್ನು ಭಾನುವಾರ ಆಯೋಜಿಸಿರುವುದಾಗಿ ತಿಳಿಸಿದರು.
ಆದರೆ, ಪಕ್ಷದಲ್ಲಿ ಮತ್ತೆ ಭುಗಿಲೆದ್ದಿರುವ ಭಿನ್ನಮತ, ಸಂಪುಟ ವಿಸ್ತರಣೆ ಮಾಡಲೇಬೇಕೆಂದು ಶಾಸಕರು ಹೇರಿರುವ ಒತ್ತಡ ಮತ್ತು ಪ್ರತಿಪಕ್ಷಗಳು ಸರ್ಕಾರವನ್ನು ಬೀಳಿಸಲಿವೆ ಎಂಬ ವದಂತಿ ಹಿನ್ನೆಲೆಯಲ್ಲಿ ರೂಪಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಯಡಿಯೂರಪ್ಪ ಅವರು ಈ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಸೌಜನ್ಯ: ಕನ್ನಡಪ್ರಭ